ಕೃಷ್ಣ (ಸೇವುಣ) 
 	ದೇವಗಿರಿಯ ಸೇವುಣರ 2ನೆಯ ಸಿಂಘಣ್ಣನ ಮೊಮ್ಮಗ ಮತ್ತು ಜೈತುಗಿಯ ಮಗ. ಇವನ ಆಳ್ವಿಕೆಯ ಅವಧಿ 1247-61. ಸಿಂಘಣ್ಣನಿಗಿಂತ ಮೊದಲೇ ಜೈತುಗಿ ಕಾಲವಾದ್ದರಿಂದ ಸಿಂಘಣ್ಣನ ಅನಂತರ ಕೃಷ್ಣನೇ ಸಿಂಹಾಸನವನ್ನೇರಿದ (1247). ಶಾಸನಗಳಲ್ಲಿ ಇವನ ಹೆಸರು ಕನ್ಹ, ಕನ್ಹಪ, ಕಂಧಾರ, ಕನ್ಹಾರ ಎಂದೆಲ್ಲ ಉಲ್ಲೇಖಿತವಾಗಿದೆ. ರಾಜ್ಯಭಾರವನ್ನು ವಹಿಸಿಕೊಂಡ ಅನಂತರ ಈತ ಮಾಳ್ವದೇಶದ ದೊರೆಯಾಗಿದ್ದ ಜೈತುಗಿ ದೇವನನ್ನೂ ಗುಜರಾತಿನ ಮೀಸಲದೇವನನ್ನೂ ಸೋಲಿಸಿದರೂ ಇದರಿಂದ ಅವನ ರಾಜ್ಯವಿಸ್ತಾರವೇನೂ ಆಗಲಿಲ್ಲ. ಈ ದಾಳಿಗಳು ಸು. 1250ರಲ್ಲಿ ನಡೆದಿರಬಹುದು.

	ಉತ್ತರದಲ್ಲಿ ಲಭ್ಯವಾದ ಈ ವಿಜಯಗಳಿಂದ ಕೃಷ್ಣ ಉತ್ಸಾಹಗೊಂಡು ಹೊಯ್ಸಳ ರಾಜ್ಯದ ಮೇಲೆ ಆಕ್ರಮಣ ನಡೆಸಿದಾಗ ಚಿತ್ರದುರ್ಗದ ಕೆಲವು ಭಾಗಗಳು ಅವನ ವಶವಾದುವು. ಕೃಷ್ಣನ ಮಂತ್ರಿಯಾಗಿದ್ದ ಚಾವುಂಡರಸ, ಕುಕ್ಕನೂರಿನಲ್ಲಿ ಬೀಡುಬಿಟ್ಟಿದ್ದ ಸಮಯದಲ್ಲಿ ಹೊಯ್ಸಳ ಪಾಂಡ್ಯರನ್ನು ಎದುರಿಸುತ್ತಿದ್ದುದರಿಂದ ಇದೇ ತಕ್ಕ ಸಮಯವೆಂದು ಚಾವುಂಡರಸ ಕಾವೇರಿಯ ತೀರದವರೆಗೂ ದಾಳಿ ನಡೆಸಿದ. ಹೊಯ್ಸಳ ದೊರೆ 3ನೆಯ ನರಸಿಂಹ ಅಸಹಾಯಕನಾಗಿದ್ದ. 

	ಕೃಷ್ಣ ಗೋವೆಯ ಕದಂಬರನ್ನು ಸೋಲಿಸಲು ಚಂದ್ರದೇವ ಮತ್ತು ಕೇಶವದೇವ ಎಂಬ ತನ್ನ ಮಂತ್ರಿಗಳನ್ನು ಕಳುಹಿಸಿದ. ಅವರ ದೊರೆ ಷಪ್ಠದೇವ ಸೋತು ಕೃಷ್ಣನ ಸಾಮಂತನಾದ. ಹಾನುಗಲ್ಲಿನ ಕದಂಬರು ಕೃಷ್ಣನ ಸಾಮಂತರಾಗಿದ್ದರು. ಕೃಷ್ಣ ಗುತ್ತವೊಳಲಿನ ಗುತ್ತರ ಮೇಲೂ ಯುದ್ಧ ಮಾಡಿದ. ಮೂರನೆಯ ಗುತ್ತನನ್ನು ಸೋಲಿಸಿದ. ಅವನು ಕೃಷ್ಣನ ಸಾಮಂತನಾದ. ಅವಿಧೇಯನಾಗಿದ್ದ ಸೌಂದತ್ತಿಯ ರಟ್ಟರಾಜ ಲಕ್ಷ್ಮಿದೇವನಿಗೂ ಮಹಾಪ್ರಧಾನ ನಾಗರಸನ ನೇತೃತ್ವದಲ್ಲಿ ಹೊರಟ ಸೇವುಣ ಸೈನ್ಯದಿಂದ ಸೋಲಾಯಿತು. ಅವನೂ ಸೇವುಣರ ಸಾಮಂತನಾದ. ವಂಶಪಾರಂಪರ್ಯವಾಗಿ ಬಂದಿದ್ದ ತೆಲುಂಗರಾಯ ಸ್ಥಾಪನಾಚಾರ್ಯ ಎಂಬ ಬಿರುದು ಕೃಷ್ಣನಿಗಿತ್ತಾದರೂ ಕಾಕತೀಯರೂ ಸೇವುಣರೂ ಆ ಕಾಲದಲ್ಲಿ ಮಿತ್ರರಾಗಿದ್ದರು. ಅಭೀರ ರಾಜ ಕಾಮಪಾಲನೂ ಕೃಷ್ಣನಿಂದ ಪರಾಜಯ ಹೊಂದಿದ. ಕೃಷ್ಣನ ಆಡಳಿತಕ್ಕೆ ಕೋಸಲವೂ ಸೇರಿತ್ತೆಂದು ತಿಳಿದು ಬರುತ್ತದೆ.

	ಕೃಷ್ಣನ ರಾಜ್ಯ ದಕ್ಷಿಣದಲ್ಲಿ ನೊಳಂಬವಾಡಿಯವರೆಗೂ ಪೂರ್ವದಲ್ಲಿ ಚತ್ತೀಸ್‍ಗಡದವರೆಗೂ, ಉತ್ತರದಲ್ಲಿ ಮಾಳ್ವದವರೆಗೂ ಹರಡಿತ್ತು. ಇವನು ಕೇವಲ ಯುದ್ದಾಸಕ್ತನಾಗಿರದೆ ಸಾಂಸ್ಕøತಿಕ ಕಾರ್ಯಗಳಲ್ಲೂ ಆಸಕ್ತಿ ವಹಿಸಿದ್ದ. ಕೃಷ್ಣನ ಆಶ್ರಯದಲ್ಲಿ ಸೂಕ್ತಿ ಮುಕ್ತಾವಲೀ ಎಂಬ ಸಂಸ್ಕøತ ಗ್ರಂಥವನ್ನು ಜಲ್ಹಣಪಂಡಿತನೂ ಕಲ್ಪತರು ಎಂಬ ಸಂಸ್ಕøತ ಗ್ರಂಥವನ್ನು ಅಮಲಾನಂದನೂ ರಚಿಸಿದರು. ಬ್ರಾಹ್ಮಣ, ಶೈವ, ವೀರಶೈವ, ಜೈನ ಮತ್ತು ಮಹಾನುಭಾವ ಪಂಥದ ಮುನಿಗಳಿಗೆ ಮತ್ತು ದೇವಾಲಯಗಳಿಗೆ ಇವನಿಂದ ಆಶ್ರಯ ದೊರಕಿತೆಂದು ಶಾಸನಗಳಿಂದ ತಿಳಿಯುತ್ತದೆ. ಚಕ್ರಧರ ಸ್ವಾಮಿ ಕೋಸಲ ದೇಶದಲ್ಲಿ ತಂಗಿದ್ದ ಸಮಯದಲ್ಲಿ ಕೃಷ್ಣ ಅಲ್ಲಿಗೆ ಹೋಗಿ (1256) ಆ ಮುನಿಯ ದರ್ಶನ ಭಾಗ್ಯವನ್ನು ಪಡೆದನೆಂದು ಲೀಲಾಚರಿತ ಗ್ರಂಥ ತಿಳಿಸುತ್ತದೆ.

	ಕೃಷ್ಣ 14 ವರ್ಷಗಳ ಕಾಲ ರಾಜ್ಯವಾಳಿದ. ಸೇವುಣ ರಾಜ್ಯ ಇವನ ಕಾಲದಲ್ಲಿ ಪ್ರಭಾವಶಾಲಿಯಾಗಿತ್ತು. ಇವನು 1261ರಲ್ಲಿ ಮರಣ ಹೊಂದಿದ.           								
	(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ